ರೋಸೆಟ ಶಿಲೆ
ಉತ್ತರ ಅರಬ್ ಗಣರಾಜ್ಯದ ಈಜಿಪ್ಟ್‍ನ ನೈಲ್ ನದಿ ಮುಖಜ ಭೂಮೀಪ್ರದೇಶದ ಅಲೆಕ್ಸಾಂಡ್ರಿಯ ನಗರದ ಸಮೀಪ ಇರುವ ರೋಸೆಟ ಎಂಬ ಸ್ಥಳದಲ್ಲಿ ದೊರೆತ ಶಿಲಾಫಲಕ (ರೋಸೆಟ ಸ್ಟೋನ್). ಇದನ್ನು 1799ರಲ್ಲಿ ಫ್ರಾನ್ಸಿನ ಯೋಧ ಬೌಚರ್ಡ್ ಎಂಬವ ಪತ್ತೆ ಮಾಡಿದ. ಇದರ ಮೇಲೆ ಹೈರಾಗ್ಲಿಫಿಕ್, ಡೆಮಾಟಿಕ್ ಮತ್ತು ಗ್ರೀಕ್ ಲಿಪಿಗಳಲ್ಲಿ ಬರೆಯಲಾಗಿರುವ ಶಾಸನ ಪಂಕ್ತಿಗಳಿವೆ. 

	ಮೆಂಫಿಸ್ ನಗರದ ಪುರೋಹಿತರಿಂದ ಬರೆಯಲಾದ ಈ ಶಾಸನದಲ್ಲಿ ಐದನೆಯ ಟಾಲೆಮಿ ಎಪಿಫಾನೆಸ್ (ಕ್ರಿ.ಪೂ. 205-180) ತನ್ನ ಆಳಿಕೆಯ 9ನೆಯ ವರ್ಷದಲ್ಲಿ ತಾನು ಪಟ್ಟಕ್ಕೆ ಬಂದ ಘಟನೆಯ ಸ್ಮಾರಕವಾಗಿ ಈ ಶಾಸನವನ್ನು ಬರೆಸಿದ. 

	ಇಂಗ್ಲೆಂಡಿನ ಭೌತವಿಜ್ಞಾನಿ ತಾಮಸ್ ಯಂಗ್ (1773-1829) ಈ ಶಾಸನದ ಮೇಲೆ ರಾಜರ ಹೆಸರುಗಳನ್ನು ಆಯಾಕಾರದ ಕಂಸಗಳಲ್ಲಿ ಬರೆದಿದ್ದುದನ್ನು ಪತ್ತೆಹಚ್ಚಿ 18-19ನೆಯ ಶತಮಾನಗಳಲ್ಲಿ ಓದಲು ಬರುತ್ತಿದ ಗ್ರೀಕ್ ಲಿಪಿಯ ಸಹಾಯದಿಂದ ಹೈರಾಗ್ಲಿಫಿಕ್ ಲಿಪಿಯನ್ನು ಓದುವುದು ಸಾಧ್ಯವೆಂದು ತೋರಿಸಿಕೊಟ್ಟ. ಇದಲ್ಲದೆ ರಾಜರ ಹೆಸರಿನ ಹದಿಮೂರು ಸಂಕೇತಗಳ ಪೈಕಿ ಆರಕ್ಕೆ ಸರಿಯಾದ ಮತ್ತೆ ಮೂರಕ್ಕೆ ಬಲುಮಟ್ಟಿಗೆ ಸರಿಯಾದ ಧ್ವನ್ಯಾತ್ಮಕ ಮೌಲ್ಯಗಳನ್ನೂ ಸೂಚಿಸಿದ. ಶಿಲೆಯ ಮೇಲೆ ಬಿಡಿಸಲಾಗಿದ್ದ ಚಿತ್ರಲಿಪಿಗಳಲ್ಲಿನ ಪ್ರಾಣಿ, ಪಕ್ಷಿಗಳ ಚಿತ್ರಗಳ ಸಹಾಯದಿಂದ ಬರೆವಣಿಗೆಯ ದಿಕ್ಕನ್ನೂ ಸೂಚಿಸಿದ. 

	ಫ್ರಾನ್ಸಿನ ಜೀನ್-ಫ್ರಾಂಕಾಯ್ ಚಾಂಪೋಲಿಯಲ್ ಎಂಬ ವಿದ್ವಾಂಸ 1821-22ರಲ್ಲಿ ಯಂಗನ ಕಾರ್ಯವನ್ನು ಮುಂದುವರೆಸಿ ಹೈರಾಗ್ಲಿಫಿಕ್ ಲಿಪಿ ಮತ್ತು ಗ್ರೀಕ್ ಲಿಪಿಗಳ ಪರಸ್ಪರ ಮೌಲ್ಯಗಳನ್ನು ನಿರ್ಧರಿಸಿ ಹೈರಾಗ್ಲಿಫಿಕ್ ಲಿಪಿಯನ್ನು ಪೂರ್ಣವಾಗಿ ಓದುವ ಹಾಗೆ ಮಾಡಿದಲ್ಲದೆ ಡೆಮಾಟಿಕ್ ಲಿಪಿಯನ್ನೂ ಓದಿದ. ಕೆಲವು ಚಿಹ್ನೆಗಳು ಅಕ್ಷರ ರೂಪದಲ್ಲೂ ಕೆಲವು ವರ್ಣಾತ್ಮಕ ರೂಪದಲ್ಲೂ ಮತ್ತೆ ಕೆಲವು ಭಾವಾತ್ಮಕ ರೂಪದಲ್ಲೂ ಇವೆಯೆಂದು ಚಾಂಪೋಲಿಯನ್ ತೋರಿಸಿದ. ಶಾಸನವನ್ನು ಮೊದಲು ಗ್ರೀಕ್ ಭಾಷೆಯಲ್ಲಿ ಬರೆದು ಬಳಿಕ ಅದನ್ನು ಹೈರಾಗ್ಲಿಫಿಕ್ ಭಾಷೆಗೆ ಅನುವಾದಿಸಲಾಯಿತೆಂದೂ ನಿರ್ಧರಿಸಿದ. ಈ ನಿರ್ಧಾರಗಳು ಮುಂದೆ ವಿಫುಲವಾದ ಪ್ರಾಚೀನ ಈಜಿಪ್ಟಿನ ಬರೆಹಗಳನ್ನು ಓದಲು ಸಹಾಯಕವಾದುವು. ಈ ಶಿಲೆ ಈಗ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮ್ಮಿನಲ್ಲಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಟಿ.ವಿ.ಎಸ್.)